ಆರೋಗ್ಯ ರಕ್ಷಣೆ
ಸಾಂಕ್ರಾಮಿಕ ರೋಗಗಳಿಂದ ಕುರಿ ಸಾಕಣೆದಾರರಿಗೆ ಅಪಾರ ಆರ್ಥಿಕ ಹಾನಿಯುಂಟಾಗುತ್ತದೆ. ಸಾಂಕ್ರಮಿಕ ರೋಗಗಳನ್ನು ತಡೆಗಟ್ಟಲುಕುರಿ ಸಾಕಣೆದಾರರು ತಪ್ಪದೆ ಈ ಮುಂದಿನ ಕ್ರಮಗಳನ್ನು ಅನುಸರಿಸಬೇಕು:
- ಕುರಿಗಳಿಗೆ ಬರುವಂತಹ ಎಲ್ಲ ಸಾಂಕ್ರಾಮಿಕ ರೋಗಗಳಿಗೆ ಮುಂಗಾರು ಮಳೆ ಬೀಳುವ ಮುನ್ನವೇ ಆಯಾ ರೋಗದ ಲಸಿಕೆಯನ್ನು 15 ದಿನಗಳ ಮುಂಚಿತವಾಗಿ ಪರಿಣಿತ ಪಶುಪಾಲಕರು ಇಲ್ಲವೇ ಪಶುವೈದ್ಯರಿಂದ ಹಾಕಿಸಬೇಕು.
- ಕುರಿಗಳನ್ನು ರೋಗಭಾಧೆಗಳಿಂದ ಮುಕ್ತವಿರುವ ಪ್ರದೇಶದಲ್ಲಿ ಮೇಯಿಸಬೇಕು. ಯಾವಾಗಲೂ ಹರಿಯುವ ನೀರನ್ನು ಕುಡಿಸಬೇಕು. ಎಲ್ಲಾ ವರ್ಗದ ಕುರಿಗಳಿಗೆ ದಾಣಿ ಮಿಶ್ರಣ ಕೊಡುವುದನ್ನು ರೂಢಿ ಮಾಡಬೇಕು.
- ರೋಗಗ್ರಸ್ತ ಕುರಿಗಳನ್ನು ಬೇರ್ಪಡಿಸಿ ಚಿಕಿತ್ಸೆ ಮಾಡಿಸಬೇಕು.
- ಕುರಿಗಳನ್ನು ಆದಷ್ಟೂ ವಾತಾವರಣದ ಏರುಪೇರುಗಳಿಂದ ಸಂರಕ್ಷಿಸಬೇಕು.
- ಕುರಿಗಳಿಗೆ ವರ್ಷಕ್ಕೆ 2-3 ಸಲ ಜಂತುನಾಶಕ ಔಷಧಿ ಹಾಕಿಸುವುದು ಸೂಕ್ತ.
1. ನೆರಡಿರೋಗ (ಆಂಥ್ರಾಕ್ಸ್)
- ಇದು ಬ್ಯಾಸಿಲ್ಲಸ್ ಆಂತ್ರಾಸಿಸ್ ಎಂಬ ರೋಗಾಣುವಿನಿಂದ ಬರುತ್ತದೆ.
- ರೋಗವು ಅಲ್ಲಲ್ಲಿ ಕಂಡು ಬಂದು, ಪ್ರತಿ ವರ್ಷವೂ ಕುರಿಗಳಲ್ಲಿ ತೀವ್ರ ಸ್ವರೂಪದಲ್ಲಿ ಕಾಣಿಸಿಕೊಳ್ಳುತ್ತದೆ.
- ಸೋಂಕಿನಿಂದ ಕೂಡಿದ ಮಣ್ಣು ಹಾಗೂ ಹುಲ್ಲಿನಿಂದಲೂ ಹರಡಬಹುದು.
- ಕಚ್ಚುವ ಮತ್ತು ರಕ್ತ ಹೀರುವ ಕೀಟಗಳಿಂದಲೂ (ಹೇನು, ಉಣ್ಣೆ ಮತ್ತು ನೊಣ) ಮಾಂಸಭಕ್ಷಕ ಪಕ್ಷಿ ಮತ್ತು ಪ್ರಾಣಿಗಳಿಂದಲೂ ಸಹ ಈ ರೋಗ ಹರಡಬಹುದು.
- ನೀರು ಹರಿಯುವ ಹೊಳೆ ಅಥವಾ ನಾಲೆಗಳ ಮುಖಾಂತರ ಹರಡಬಹುದು.
- ಎಳೆಯ ಪ್ರಾಯದ ಪ್ರಾಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೋಗಕ್ಕೆ ಗುರಿಯಾಗುತ್ತವೆ.
- ಪ್ರಾಣಿಗಳನ್ನು ದೂರದ ಸ್ಥಳಗಳಿಗೆ ಸಾಗಿಸುವಾಗ ಹಾಗೂ ಕಾಲು ಬಾಯಿ ಜ್ವರದ ಪ್ರಭಾವದಿಂದ ಈ ರೋಗವು ಉಲ್ಬಣಗೊಳ್ಳುತ್ತದೆ.
- ಮಳೆಗಾಲದಲ್ಲಿ ನೀರಿನ ಹೊಳೆ ಹರಿಯುವುದರಿಂದಲು ಕುರಿಗಳಲ್ಲಿ ಬೇಗನೆ ರೋಗವು ಹರಡುತ್ತದೆ.
ರೋಗ ಲಕ್ಷಣಗಳು:
- ಈ ರೋಗ ಅತಿ ಶೀಘ್ರವಾಗಿ ಮತ್ತು ತೀವ್ರ ಸ್ವರೂಪದಲ್ಲಿ ಹರಡುತ್ತದೆ.
- ಪ್ರಾಣಿಗಳಲ್ಲಿ ಬಾಯಿ ಮತ್ತು ಮೂಗಿನಿಂದ ನೊರೆಯುಕ್ತ ಹೆಪ್ಪುಗಟ್ಟಿದ ರಕ್ತಸ್ರಾವವಾಗಿ ಸಾಯುತ್ತವೆ.
- ಜ್ವರ ಏರಿಕೆ, ಉಸಿರಾಟ ತೊಂದರೆ ಹಾಗೂ ನಡುಕ ಹುಟ್ಟುವುದು, ಹಲ್ಲು ಕಡಿಯುವಿಕೆ.
- ಕಣ್ಣು ತಿರುಗುವಿಕೆ, ಜೊತೆಗೆ ಕಾಯಿಲೆಯಿಂದ ಬಳಲುವ ಕುರಿಗಳು ಬಹಳ ನಿತ್ರಾಣಗೊಂಡು ಒಂದೇ ಕಡೆ ಬಿದ್ದಿರುತ್ತವೆ.
ನಿವಾರಣೋಪಾಯಗಳು:
ಬ್ಯಾಸಿಲ್ಲಸ್ ಆಂತ್ರಾಸಿಸ್ ಜೈವಿಕ ಲಸಿಕೆಯನ್ನು ಹಾಕಿಸಬೇಕು.
2. ಕರುಳು ಬೇನೆ
- ಸಾಮಾನ್ಯವಾಗಿ ಕುರಿ ಮರಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
- ಕುರಿಗಳು ಹೆಚ್ಚು ಮೇವು ಅಥವಾ ಪಿಷ್ಟ ಪದಾರ್ಥಗಳನ್ನು ತಿಂದಾಗ ಹೊಟ್ಟೆ ಮತ್ತು ಕರುಳು ಕಟ್ಟಿಕೊಂಡು, ರೋಗಾಣುಗಳು ಹೆಚ್ಚಾಗಿ ವೃದ್ಧಿಯಾಗಿ ರೋಗದ ನಂಜನ್ನು ಹೆಚ್ಚಿಸಿ ಸಾವನ್ನುಂಟುಮಾಡುತ್ತವೆ.
- ರೋಗಾಣುಗಳು ಮಣ್ಣಿನಲ್ಲಿಯೂ ಮತ್ತು ಬಿಸಿ ರಕ್ತದ ಎಲ್ಲ ಪ್ರಾಣಿಗಳಲ್ಲಿಯೂ ಕಂಡು ಬರುತ್ತವೆ.
ರೋಗ ಹರಡಲು ನೆರವಾಗುವ ಅಂಶಗಳು
- ಹಾಲು ಕುಡಿಯುವ ಕುರಿಮರಿಗಳು.
- ಇಬ್ಬನಿ ಅಥವಾ ಮಂಜುಕೂಡಿದ ಪ್ರದೇಶದಲ್ಲಿ ಮೇಯುವಿಕೆ.
- ಆಸೆ ಬುರುಕುತನದಿಂದ ಆಹಾರ ತಿನ್ನುವ ಮತ್ತು ಹೆಚ್ಚು ಕೊಬ್ಬಿದ ಕುರಿಗಳು.
- ಅತಿ ಹೆಚ್ಚು ಜೋಳವನ್ನು ಮೇಯಿಸಿದಾಗ ಮತ್ತು ಆಹಾರವನ್ನು ಬದಲಿಸಿದಾಗ ಈ ರೋಗ ಕಂಡು ಬರುತ್ತದೆ.
ರೋಗ ಲಕ್ಷಣಗಳು:
- ಮೂತ್ರದಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ
- ಕುರಿಗಳಲ್ಲಿ ಬೇಧಿಯಾಗುವಿಕೆ
- ರೋಗ ತೀವ್ರ ಸ್ವರೂಪದ್ದಾದ್ದರಿಂದ ಯಾವ ಚಿಹ್ನೆಯೂ ಇಲ್ಲದ ಕುರಿಗಳು ಸಾಯುತ್ತವೆ.
- ರೋಗಗ್ರಸ್ತ ಪ್ರಾಣಿಗಳು ಮಂಕಾಗುವುದಲ್ಲದೆ ನಿಂತುಕೊಳ್ಳಲಾಗುವುದಿಲ್ಲ. ಅಲ್ಲದೆ ಕೆಲವು ಅರೆ ಪ್ರಜ್ಞವಸ್ಥೆಯಲ್ಲಿದ್ದು ತಲೆಯನ್ನು
- ಹಿಂದಕ್ಕೆ ಚಾಚಿ ನಿಸ್ಸಹಾಯಕವಾಗಿ ಕಾಲುಗಳನ್ನು ಅಡಿಸಿ ಪ್ರಜ್ಞೆಯನ್ನು ಕಳೆದುಕೊಳ್ಳುತ್ತವೆ.
ನಿವಾರಣೆ:
- ಪದೇ ಪದೇ ಮೇವನ್ನು ಬದಲಿಸಬಾರದು
- ಹೆಚ್ಚಾಗಿ ಪಿಷ್ಟ ಪದಾರ್ಥಗಳನ್ನು ತಿನ್ನಲು ಬಿಡಬಾರದು
- ರೋಗ ನಿವಾರಣೆಗೆ 3 ತಿಂಗಳ ಮೇಲ್ಪಟ್ಟ ಮರಿಗಳಿಗೆ 21 ದಿನಗಳ ಅಂತರದಲ್ಲಿ 2 ಬಾರಿ ಲಸಿಕೆಗಳನ್ನು ತಪ್ಪದೆ ಹಾಕಿಸಬೇಕು
3. ಗಳಲೆ ರೋಗ (ಪಾಶ್ಚುರೆಲ್ಲೊಸಿಸ್)
- ಈ ರೋಗಕ್ಕೆ ಸಾಗಣಿಕೆ ಜ್ವರ, ರಕ್ತ ನಂಜು ಹಾಗೂ ನ್ಯುಮೋನಿಯಾ ಎಂದು ಸಹ ಕರೆಯಲಾಗುತ್ತದೆ. ಈ ಕಾಯಿಲೆಯು ಎಲ್ಲ ಕಡೆಗಳಲ್ಲಿಯೂ ಕಂಡುಬರುತ್ತದೆ.
- ರೋಗಾಣುಗಳು ಸಾಮಾನ್ಯವಾಗಿ ಶ್ವಾಸನಾಳದಲ್ಲಿ ಮತ್ತು ಕರುಳಿನಲ್ಲಿ ವಾಸವಾಗಿರುತ್ತವೆ.
ರೋಗ ಪ್ರಸಾರ:
- ಕುರಿಗಳನ್ನು ಬಹಳ ದೂರದವರೆಗೆ ಸಾಗಿಸುವುದು.
- ಮಳೆ ಮತ್ತು ಬದಲಾದ ವಾತಾವರಣದಲ್ಲಿ ಕುರಿಗಳನ್ನು ಒಂದೆಡೆಕೂಡಿ ಹಾಕುವುದು.
- ಹೆಚ್ಚು ಕುರಿಗಳನ್ನು ಕಡಿಮೆ ಸ್ಥಳಾವಕಾಶದಲ್ಲಿ ಕೂಡುವುದು
- ಕಲುಷಿತ ಮೇವು ಅಥವಾ ನೀರುಕುಡಿಸುವುದು.
ರೋಗ ಲಕ್ಷಣಗಳು:
- ಈ ರೋಗವು ರಕ್ತ ನಂಜು ಅಥವಾ ನ್ಯುಮೋನಿಯಾ ಕಾಯಿಲೆಯಿಂದ ಕೂಡಿದ್ದು, ಜ್ವರದಲ್ಲಿ ಏರಿಕೆ, ಮಂಕಾಗುವಿಕೆ.
- ಉಸಿರಾಡಲು ತೊಂದರೆ, ಮೂಗಿನಲ್ಲಿ ಲೋಳೆರಸ ಸುರಿಯುವಿಕೆ
- ಕುರಿಗಳನ್ನು ಪರೀಕ್ಷಿಸಿದಾಗ ಶರೀರವು ರಕ್ತ ನಂಜಿನಿAದ ಕೂಡಿದ್ದು ಸಣ್ಣ ಸಣ್ಣ ಕಣಗಳ ಮಾದರಿಯ ರಕ್ತಸ್ರಾವವು ಚರ್ಮದ ಮತ್ತು ಕರುಳಿನ ಒಳ ಪದರಗಳಲ್ಲಿ ಕಂಡುಬರುತ್ತದೆ.
ರೋಗ ಗುರುತಿಸುವಿಕೆ:
- ಈ ರೋಗವು ಕೆಲವು ಪ್ರದೇಶಗಳಲ್ಲಿ ಆಗಾಗ ಕಂಡುಬರುವುದು. ಅಂತಹ ಸ್ಥಳಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
- ಇರುವ ಕುರಿಗಳ ಜೊತೆಗೆ ಹೊಸದಾಗಿ ಬಂದ ಕುರಿಗಳ ಸೇರ್ಪಡೆಯನ್ನು ಗಮನಿಸುವುದು.
ನಿವಾರಣಾ ಚಿಕಿತ್ಸೆ:
- ಈ ರೋಗವನ್ನು ಗುಣಪಡಿಸಲು ಸಲ್ಫಾ ಆ್ಯಂಟಿಬಯೋಟಿಕ್ಸ್ ಔಷಧಿಗಳು ಉಪಯುಕ್ತ.
- ಲಸಿಕೆಯನ್ನು ಹಾಕಿಸಬೇಕು.
- ಗಾತ್ರಕ್ಕೆ ಅನುಗುಣವಾಗಿ ಕುರಿಗಳಿಗೆ ಕಂಕಳು ಅಥವಾ ತೊಡೆಯ ಒಳಭಾಗದಲ್ಲಿ ಚುಚ್ಚಬೇಕು.
4. ಚಪ್ಪೆರೋಗ
- ಈ ರೋಗವು ಮುಖ್ಯವಾಗಿ ಕುರಿಗಳಲ್ಲಿ ಮತ್ತು ದನಗಳಲ್ಲಿ ಕಂಡುಬರುತ್ತಿದೆ.
- ಚಪ್ಪೆರೋಗವು ಒಂದು ತೀವ್ರರೂಪದ ರೋಗ
- ರೋಗ ಪ್ರಸಾರ: ರೋಗಾಣುಗಳು ಸಾಮಾನ್ಯವಾಗಿ ಸೋಂಕು ತಗುಲಿದ ನೆಲ ಅಥವಾ ಮೇವಿನಿಂದ ಹರಡುತ್ತವೆ. ಉಣ್ಣೆ ಕತ್ತರಿಸುವಾಗ ಆಗುವ ಗಾಯಗಳಿಂದ ಸಹ ರೋಗಾಣುಗಳು ಶರೀರವನ್ನು ಹೊಕ್ಕು ಚಪ್ಪೆ ಭಾಗದಲ್ಲಿ ಊತವನ್ನುಂಟು ಮಾಡುತ್ತವೆ.
ರೋಗ ಲಕ್ಷಣಗಳು:
- ರೋಗಪೀಡಿತ ಕುರಿಗಳಲ್ಲಿ ಜ್ವರದ ಏರಿಕೆ ಹಾಗೂ ಕುಂಟುವಿಕೆ ಕಂಡುಬರುತ್ತದೆ.
- ಚಪ್ಪೆ, ಹಿಂಭಾಗ, ಭುಜ ಹಾಗೂ ಕುತ್ತಿಗೆ ಭಾಗದಲ್ಲಿ ದಪ್ಪನಾದ ಊತ ಕಂಡುಬರುತ್ತದೆ.
- ಈ ಊತಗಳನ್ನು ಕೈಯಿಂದ ಸವರಿದಾಗ ಅದರಲ್ಲಿ ಗಾಳಿ ತುಂಬಿರುವುದು ಕಂಡುಬರುತ್ತದೆ.
- ನಿರಾಸಕ್ತಿ, ನಿರುತ್ಸಾಹ ಹಾಗೂ ಮೇವು ತಿನ್ನುವುದು ಬಿಡುತ್ತದೆ.
ನಿವಾರಣೋಪಾಯಗಳು: ಚಪ್ಪೆರೋಗದ ಲಸಿಕೆಯನ್ನು ಮುಂಗಾರು ಮಳೆ ಬೀಳುವ ಮುನ್ನ ಹಾಕಿಸಬೇಕು.
5. ನೀಲಿ ನಾಲಿಗೆ ರೋಗ
- ಈ ರೋಗ ದನ, ಕುರಿ ಮತ್ತು ಮೇಕೆಗಳಲ್ಲಿ ಬರುವುದಾದರೂ, ಹೆಚ್ಚಾಗಿ ಕುರಿಗಳಲ್ಲಿ ಕಂಡು ಬರುವುದು ಸ್ವಾಭಾವಿಕ.
ರೋಗ ಲಕ್ಷಣಗಳು:
- ಈ ರೋಗ ತಗುಲಿದ ಕುರಿಗಳು ಮೇಯುವುದಿಲ್ಲ. ಮಂಕಾಗಿ ನಿಲ್ಲುತ್ತವೆ.
- ಜ್ವರ ಬರುತ್ತದೆ. ಕಿವಿ, ಮೂಗು, ಕಣ್ಣುರೆಪ್ಪೆ ಮತ್ತು ಗಂಟಲು ಭಾಗಗಳಲ್ಲಿ ಊತ ಕಾಣಿಸಿಕೊಳ್ಳುವುದು, ಬಾಯಿಯ ಮತ್ತು ಮೂಗಿನ ಒಳಪದರ ಕೆಂಪಾಗುವಿಕೆ ಮತ್ತು ನೊರೆಯುಕ್ತ ಜೊಲ್ಲು ಸುರಿಯುವಕೆ, ತುಟಿ, ವಸಡು, ಮುಖ ಹಾಗೂ ಗಡ್ಡದ ಭಾಗ ಬಾತುಕೊಳ್ಳುವುದು.
- ನಾಲಗೆಯು ಕೆಲವು ಕುರಿಗಳಲ್ಲಿ ಮಾತ್ರ ನೀಲಿ ಬಣ್ಣವಾಗಿರುವುದು ಕಂಡು ಬರುತ್ತದೆ.
- ಬಾಯಿಯಲ್ಲಿ ಹುಣ್ಣುಗಳಾಗಿ ನಾಲಗೆ ದಪ್ಪವಾಗುತ್ತದೆ.
- ರೋಗಗ್ರಸ್ತ ಕುರಿಯು ಹಿಂಡಿನಿಂದ ಹಿಂದೆ ಉಳಿಯುತ್ತದೆ ಮತ್ತು ಗೊರಸಿನ ಮೇಲ್ಬಾಗದಲ್ಲಿ ಹಾಗೂ ಗೊರಸಿನ ಒಳಭಾಗದಲ್ಲಿ ಗಾಯಗಳು ಕಂಡುಬರುತ್ತವೆ.
- ಇದರಿಂದಾಗಿ ಕುರಿಗಳು ನಡೆಯಲಾಗದೆ, ಮೇವು ತಿನ್ನದೆ ಸುಸ್ತಾಗಿ ನಿಶ್ಯಕ್ತಿ ಹೊಂದಿ ಸಾಯುತ್ತವೆ.
ನಿವಾರಣೆ :
- ಕುರಿಗಳು ಸೊಳ್ಳೆಗಳಿಂದ ದೂರವಿರುವಂತೆ ಅಂದರೆ, ಹೆಚ್ಚು ಮಳೆ ಹಾಗೂ ಚೌಗು ಪ್ರದೇಶಗಳಿಂದ ದೂರವಿಡಬೇಕು.
- ರೋಗಗ್ರಸ್ತ ಕುರಿಗಳಿಗೆ ಗಂಜಿ, ಬೆಲ್ಲ, ಸ್ವಲ್ಪ ಉಪ್ಪು ಮತ್ತು ಅಡಿಗೆ ಸೋಡವನ್ನು ಮಿಶ್ರಮಾಡಿ ಕುಡಿಸಬೇಕು.
- ಸಂಜೆ ವೇಳೆ ಕುರಿದೊಡ್ಡಿಗಳಲ್ಲಿ ಬೇವಿನ ಸೊಪ್ಪು ಮತ್ತು ಕಡ್ಡಿಗಳನ್ನು ಸುಟ್ಟು ಹೊಗೆಯಾಡಿಸಬೇಕು.
- ಮಳೆಗಾಲದಲ್ಲಿ ಉಣ್ಣೆಯನ್ನು ಕಡಿಮೆಮಾಡಬಾರದು.
- ಕುರಿಗಳಿಗೆ ನಿಯಮಿತವಾಗಿ ನೀಲಿ ನಾಲಗೆ ಲಸಿಕೆ ಹಾಕಿಸಬೇಕು.
6. ಕಾಲುಬಾಯಿ ಜ್ವರ
ಈ ರೋಗವು ಪ್ರಮುಖವಾಗಿ ಮೆಲಕುಹಾಕುವ ಪ್ರಾಣಿಗಳಲ್ಲಿ ಹರಡುವ ಒಂದು ಸಾಂಕ್ರಮಿಕರೋಗ, ಗೊರಸು ಇರುವ ಎಲ್ಲಾ ಪ್ರಾಣಿಗಳಲ್ಲಿಯೂ ಸಹ ಈ ರೋಗವು ಕಂಡುಬರುತ್ತದೆ.
ರೋಗ ಲಕ್ಷಣಗಳು:
- ಮುಖ್ಯವಾಗಿ ಬಾಯಿಯ ಮತ್ತು ಕರುಳಿನ ಲೋಳ್ಪೆರೆಯಲ್ಲಿ ಸಣ್ಣ ಬೊಕ್ಕೆಗಳಾಗುತ್ತವೆ.
- ಒಳಗೊರಸಿನಲ್ಲಿ ಹಾಗೂ ಕೆಚ್ಚಲಿನಲ್ಲೂ ಬೊಕ್ಕೆಗಳಾಗುತ್ತವೆ.
ರೋಗ ಪ್ರಸಾರ:
- ರೋಗವು ಅತಿ ಸಾಂಕ್ರಾಮಿಕವಾದದ್ದು, ರೋಗಗ್ರಸ್ತ ಪ್ರಾಣಿಗಳಿಂದ ಇತರೇ ಪ್ರಾಣಿಗಳಿಗೆ ಹರಡುತ್ತದೆ.
- ಈ ರೋಗವು ಗಾಳಿಯ ಮುಖಾಂತರ ಹಾಗೂ ಜೊಲ್ಲು, ಮೂತ್ರ, ಮಲ ಮತ್ತು ಹಾಲಿನಿಂದ ಹರಡುತ್ತದೆ.
7. ಕುರಿ ಸಿಡುಬು (ಕುರಿ ಮೈಲಿ, ದೇವಿ, ಅಮ್ಮ)
ಇದೊಂದು ಸಾಂಕ್ರಾಮಿಕ ರೋಗ, ಸಣ್ಣ ವಯಸ್ಸಿನ ಮರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನುಂಟುಮಾಡುತ್ತದೆ.
ರೋಗಕಾರಕಗಳು: ಈ ರೋಗವು ಪಾಕ್ಸ್ (Pox) ಎಂಬ ವೈರಸನಿಂದ ಉಂಟಾಗುತ್ತದೆ.
ರೋಗ ಪ್ರಸಾರ: ಈ ರೋಗದ ವೈರಸಗಳು ಗಾಳಿ, ಗೊಣ್ಣೆ, ಚರ್ಮದ ಹೊಟ್ಟು (ಬೊಬ್ಬೆ), ಜೊಲ್ಲು ಹಾಗೂ ರೊಗಗ್ರಸ್ತ ಕುರಿಗಳ ಸಂಪರ್ಕ ಪಡೆದ ವಸ್ತುಗಳು ಮತ್ತು ಜನರಿಂದ ಹರಡುತ್ತವೆ.
ರೋಗ ಲಕ್ಷಣಗಳು:
- ರೋಗಗ್ರಸ್ತ ಕುರಿಗಳಲ್ಲಿ ಜ್ವರ, ಕಣ್ಣಲ್ಲಿ ನೀರು ಸೋರುವಿಕೆ ಹಾಗೂ ಬಾಯಲ್ಲಿ ಜೊಲ್ಲು ಸೋರುವಿಕೆ ಕಂಡುಬರುತ್ತದೆ.
- ಅನಂತರ ಬಾಲದ ಬುಡ, ಕಣ್ಣಿನ ಸುತ್ತ, ಕೆಚ್ಚಲು, ತುಟಿಗಳ ಮೇಲೆ ಮತ್ತು ತೊಡೆಗಳ ಚರ್ಮದ ಮೇಲೆ ಬೊಕ್ಕೆಗಳು ಕಾಣಿಸಿಕೊಳ್ಳುತ್ತವೆ.
- ಈ ಬೊಕ್ಕೆಗಳು ಅನಂತರ ಇತರೆ ಸೋಂಕಿನಿಂದ ಹುಣ್ಣಾಗಿ ಕಾಣಿಸಿಕೊಳ್ಳಬಹುದು.
- ಕುರಿಮರಿಗಳಲ್ಲಿ ರೋಗ ಉಲ್ಬಣ ಹೆಚ್ಚಾಗಿ ಕಂಡುಬರುತ್ತದೆ.
- ರೋಗಗ್ರಸ್ತ ಮಂದೆಗಳಲ್ಲಿ ಶೇಕಡಾ 50 ಕುರಿಗಳು ಸಾಯುತ್ತವೆ.
- ಗಬ್ಬದ ಕುರಿಗಳು ಕಂದು ಹಾಕಬಹುದು.
ನಿವಾರಣೆ :
ರೋಗ ತಡೆಗಟ್ಟಲು ಕುರಿಗಳಿಗೆ ಬೇಸಿಗೆ ಕಾಲಕ್ಕೆ ಮುಂಚೆಯೇ ಕುರಿ ಸಿಡುಬು ಲಸಿಕೆ ಹಾಕಿಸಬೇಕು.
ಕುರಿಗಳಲ್ಲಿ ಲಸಿಕೆ ಹಾಗೂ ಜಂತುನಾಶಕ ಔಷಧೋಪಚಾರದ ವೇಳಾಪಟ್ಟಿ
| ಕ್ರ.ಸಂ. |
ರೋಗ |
ಲಸಿಕೆ ಹಾಕುವ ವಯಸ್ಸು |
ಲಸಿಕೆ ಹಾಕುವ ಸಮಯ |
| 1. |
ಕರುಳು ಬೇನೆ |
4 ತಿಂಗಳು ಮೇಲ್ಪಟ್ಟು |
ವರ್ಷಕ್ಕೆ ಎರಡು ಬಾರಿ ಜನೆವರಿ ಮತ್ತು ಜುಲೈ ತಿಂಗಳಲ್ಲಿ |
| 2. |
ಕಾಲು ಬಾಯಿ ರೋಗ (ಖುರಖತ್) |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೆ ಎರಡು ಬಾರಿ ಫೆಬ್ರವರಿ-ಮಾರ್ಚ್ & ಅಗಷ್ಟ್-ಸಪ್ಟೆಂಬರ್ ತಿಂಗಳಲ್ಲಿ |
| 3. |
ಚಪ್ಪೆ ಬೇನೆ |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ |
| 4. |
ಗಂಟಲು ಬೇನೆ |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ |
| 5. |
ನರಡಿ ರೋಗ |
6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಏಪ್ರಿಲ್ – ಮೇ ತಿಂಗಳಲ್ಲಿ (ರೋಗ ಕಂಡುಬಂದ ಪ್ರದೇಶದಲ್ಲಿ) |
| 6. |
ಪಿ.ಪಿ.ಆರ್ |
4 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಜೂನ್ – ಜುಲೈ ತಿಂಗಳಲ್ಲಿ |
| 7. |
ನೀಲಿ ನಾಲಿಗೆ ರೋಗ |
4-6 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಅಗಷ್ಟ್ ತಿಂಗಳಲ್ಲಿ |
| 8. |
ಸಿಡುಬು ರೋಗ |
4 ತಿಂಗಳು ಮೇಲ್ಪಟ್ಟು |
ವರ್ಷಕ್ಕೊಮ್ಮೆ ಡಿಸೆಂಬರ್ ತಿಂಗಳಲ್ಲಿ |